ಪರಮಾರ -
ಮಾಲದಲ್ಲೂ ಮೌಂಟ್ ಅಬು, ವಾಗಡ, ಜಾಲೋರ್ ಭಿನ್ಮಾಲ್‍ಗಳಲ್ಲೂ ಆಳಿದ ರಾಜರ ವಂಶ. ಮಾಲದವ ಪರಮಾರರ ಮೂಲಸ್ಥಾನ ರಾಜಪುಟಾಣದ ಮೌಂಟ್ ಅಬು ಎಂದು ಸಾಮಾನ್ಯವಾಗಿ ಭಾವಿಸಲಾಗಿತ್ತು. ಈ ಅಭಿಪ್ರಾಯಕ್ಕೆ ಪದ್ಮಗುಪ್ತ ಕವಿ ನಿರೂಪಿಸಿದ ಕಥೆಯೇ ಮುಖ್ಯ ಆಧಾರ. ಅನಂತರದ ಕಾಲದ ಪರಮಾರರ ಸಾಹಿತ್ಯ ಮತ್ತು ಶಾಸನಗಳು ಈ ಅಭಿಪ್ರಾಯವನ್ನೇ ಎತ್ತಿ ಹಿಡಿಯುತ್ತವೆ. ಈ ಕಥೆಯ ಪ್ರಕಾರ ವಸಿಷ್ಠಮುನಿಯ ಬಳಿ ಇದ್ದ ಕಾಮಧೇನುವನ್ನು ವಿಶ್ವಾಮಿತ್ರ ಕಳವು ಮಾಡಿದನೆಂದೂ ಅದನ್ನು ಮರಳಿ ಪಡೆಯಲು ವಶಿಷ್ಠ ಮೌಂಟ್ ಅಬುವಿನ ಮೇಲೆ ಯಜ್ಞ ಮಾಡಿದಾಗ ಕುಂಡದಿಂದ ಅಪ್ರತಿಮ ವೀರನೊಬ್ಬ ಉದಯಿಸಿ ಕಾಮಧೇನುವನ್ನು ವಿಶ್ವಾಮಿತ್ರನಿಂದ ಬಲಾತ್ಕಾರವಾಗಿ ಬಿಡಿಸಿ ತಂದು ವಸಿಷ್ಠರಿಗೆ ಒಪ್ಪಿಸಿದನೆಂದೂ ಮುನಿ ಆ ವೀರನ ಸಾಹಸವನ್ನು ಮೆಚ್ಚಿ ಪರಮಾರ (ಶತ್ರುನಾಶಕ) ಎಂದು ನಾಮಕರಣ ಮಾಡಿ ಅವನಿಗೆ ರಾಜ್ಯವನ್ನು ಅನುಗ್ರಹಿಸಿದನೆಂದೂ ವರ್ಣಿಸಲಾಗಿದೆ. ಕೃಷ್ಣರಾಜ ಅಥವಾ ಉಪೇಂದ್ರ ಎಂಬವನು ಈ ವಂಶದ ಮೂಲಪುರಷ ಮತ್ತು ಸ್ಥ್ಫಾಪಕ ಎನ್ನಲಾಗಿದೆ. ಈ ವರ್ಣನೆ ಆರಂಭಕಾಲದ ಶಾಸನಗಳಲ್ಲಿ ಕಂಡುಬರುವುದಿಲ್ಲ. ಇವರ ಅತ್ಯಂತ ಪ್ರಾಚೀನ ಶಾಸನದ ಪ್ರಕಾರ ಇವರು ರಾಷ್ಟ್ರಕೂಟ ಸಂಬಂದಿಗಳೆಂದು ತಿಳಿದುಬರುತ್ತದೆ. ಇವರು ಆರಂಭದಲ್ಲಿ ರಾಷ್ಟ್ರಕೂಟರ ಸಾಮಂತರಾಗಿದ್ದರು.

	ಧಾರಾ (ಇಂದಿನ ಧರ್) ಮೂಲ ಪರಮಾರರ ರಾಜಧಾನಿ. ಉಪೇಂದ್ರ 9ನೆಯ ಶತಮಾನದ ಆರಂಭದಲ್ಲಿದ್ದ ಸುಮಾರು 812ರಲ್ಲಿ ರಾಷ್ಟ್ರಕೂಟರ ಮುಮ್ಮಡಿ ಗೋವಿಂದ ಪ್ರತೀಹಾರ 2ನೆಯ ನಾಗಭಟನಿಂದ ಮಾಲವನ್ನು ಗೆದ್ದು ತನ್ನ ಅನುಯಾಯಿಯಾದ ಪರಮಾರ ಉಪೇಂದ್ರನಿಗೆ ನೀಡಿದ. ಬಲಿಷ್ಠರಾದ ಪ್ರತೀಹಾರರ ವಿರುದ್ಧ ಉಪೇಂದ್ರನಿಗೆ ನೆರವಾಗಿ, ಮಾಲವದ ರಕ್ಷಣೆಗಾಗಿ ಕರ್ಕ ರಾಜನನ್ನು ನೇಮಿಸಿದ. ಉಪೇಂದ್ರನ ಗಂಡುಮಕ್ಕಳು 1ನೆ ವೈರಿಸಿಂಹ ಮತ್ತು ದಂಬರ ಸಿಂಹ. ಅವನ ಉತ್ತರಾಧಿಕಾರಿಗಳು ಸ್ವತಂತ್ರವಾಗಿ ವಾಗಡದಲ್ಲಿ ಆಳ್ವಿಕೆ ಮುಂದುವರಿಸಿದರು. ಹಿರಿಯ ಮಗನಾದ ವೈರಿಸಿಂಹ ಮಾಲವದಲ್ಲಿ ತನ್ನ ತಂದೆಯ ಉತ್ತರಾಧಿಕಾರಿಯಾದ. ಇವನ ತರುವಾಯ 1ನೆಯ ಸೀಯಕ, ಅನಂತರ ಅವನ ಮಗ 1ನೆಯ ವಾಕ್ಪತಿ ರಾಜ್ಯವಾಳಿದರು. ಇವರು ರಾಷ್ಟ್ರಕೂಟ 1ನೆಯ ಅಮೋಘ ವರ್ಷನ ಸಮಕಾಲೀನರಾಗಿದ್ದು, ಅವನನ್ನು ಆರಾಧಿಸುತ್ತಿದರೆಂದು 1ನೆಯ ಅಮೋಘವರ್ಷ ಹೇಳಿಕೊಂಡಿದ್ದಾನೆ. ಪ್ರತೀಹಾರರ ವಿರುದ್ಧ ಹೋರಾಡಲು ರಾಷ್ಟ್ರಕೂಟ ಮುಮ್ಮಡಿ ಇಂದ್ರ ಉಜ್ಜಯಿನಿಯಲ್ಲಿ ತಂಗಿದ್ದಾಗ 1ನೆಯ ವಾಕ್ಪತಿಯ ಸೇನಾ ಸಹಾಯ ಪಡೆದನೆಂದು ತಿಳಿದುಬರುತ್ತದೆ. ಇವನ ಕಾಲದಲ್ಲಿ ಮಾಲವದ ಸೈನ್ಯ ಗಂಗಾನದಿಯ ದಂಡೆಯ ವರೆಗೂ ಮುನ್ನಡೆದ್ದಿತ್ತೆಂದು ಉದೇಯಪುರ ಪ್ರಶಸ್ತಿ ತಿಳಿಸುತ್ತದೆ. ಇವನ ತರುವಾಯ 2ನೆಯ ವೈರಿಸಿಂಹ ಮಾಲದವ ಅರಸನಾದ. ಮುಮ್ಮಡಿ ಇಂದ್ರನ ಉತ್ತರಾಧಿಕಾರಿಗಳ ಕಾಲದಲ್ಲಿ ರಾಷ್ಟ್ರಕೂಟ ಸಾಮ್ರಾಜ್ಯ ಆಂತರಿಕ ಕಲಹದಲ್ಲಿ ಮುಳುಗಿದ್ದರಿಂದ ಪ್ರತೀಹಾರರು ರಾಷ್ಟ್ರಕೂಟ ಸಾಮ್ರಾಜ್ಯದ ಮೇಲೆ ಆಕ್ರಮಣ ಮಾಡಿದರು. ಮಾಲವದ 2ನೆಯ ವೈರಿಸಿಂಹ ಅವರ ದಾಳಿಯನ್ನು ಹಿಮ್ಮೆಟ್ಟಿಸಲು ವಿಫಲನಾದ. ಪ್ರತೀಹಾರರು ಮತ್ತು ಕಳಚುರಿಗಳು ನರ್ಮದಾ ನದಿಯ ವರೆಗಿನ ಪ್ರದೇಶವನ್ನು ಗೆದ್ದುಕೊಂಡು, ಉಜ್ಜಯಿನಿ ಮತ್ತು ಧಾರಾವನ್ನು ವಶಪಡಿಸಿಕೊಂಡರು. ಪ್ರತೀಹಾರವರು ತಮ್ಮ ರಾಜಪ್ರತಿನಿಧಿಯನ್ನು ಉಜ್ಜಯಿನಿಯಲ್ಲಿ ನೇಮಿಸಿದರು. ಇದರ ಪರಿಣಾಮವಾಗಿ, ಪರಮಾರರ ಸಾರ್ವಭೌಮಾಧಿಕಾರ ಮಾಲವದಲ್ಲಿ ಸುಮಾರು 946ರಲ್ಲಿ ವೇಳೆಗೆ ಮಾಯವಾಯಿತು. ಮುಮ್ಮಡಿಕೃಷ್ಣ ರಾಷ್ಟ್ರಕೂಟ ಚಕ್ರವರ್ತಿಯಾದ ಬಳಿಕ ಅವನ ನೆರವಿನಿಂದ 2ನೆಯ ವೈರಿಸಿಂಹ ಮಾಲವನ್ನು ಗೆದ್ದುಕೊಂಡ. ಇವನ ತರುವಾಯ 2ನೆಯ ಸೀಯಕ ಪರಮಾರ ಸಿಂಹಾಸನವನ್ನೇರಿದ. ಇವನಿಗೆ ಸ್ವತಂತ್ರ ಪರಮಾರ ರಾಜ್ಯವನ್ನು ನಿರ್ಮಿಸಲು ಸನ್ನಿವೇಶ ಅನುಕೂಲವಾಗಿತ್ತು. ಇವನು ಮುಮ್ಮಡಿ ಕೃಷ್ಣನಿಗೆ ವಿಧೇಯನಾಗಿದ್ದ. ಆದರೆ ಪ್ರತೀಹಾರ ಪ್ರಭುತ್ವ ಕ್ರಮೇಣ ಅವನತಿ ಹೊಂದುತ್ತಿದ್ದುದರಿಂದ ಸ್ವತಂತ್ರನಾಗಲು ಇವನಿಗೆ ಅವಕಾಶ ದೊರಕಿತು. ಪಶ್ಚಿಮದಲ್ಲಿ ಸಾಬರಮತಿ ನದಿಯ ವರೆಗೆ ಮಾಲವದ ಅಧಿಕಾರ ವಿಸ್ತರಿಸಿತು. ಇವನ ಆಳ್ವಿಕೆಯ ಉತ್ತರಾರ್ಧದಲ್ಲಿ ಮುಮ್ಮಡಿ ಕೃಷ್ಣ ಗತಿಸಿದ್ದರಿಂದ, ರಾಷ್ಟ್ರಕೂಟರಿಂದ ಸ್ವತಂತ್ರನಾಗಲು ಇವನಿಗೆ ಅವಕಾಶ ದೊರಕಿತು. ಇವನು ಕೃಷ್ಣನ ಉತ್ತರಾಧಿಕಾರಿ ಖೊಟ್ಟನಿಗೆ ವಿಧೇಯನಾಗಿರಲು ಒಪ್ಪದೆ ದಂಗೆಯೆದ್ದ. ಪರಮಾರ ಸೈನ್ಯ ರಾಷ್ಟ್ರ ಕೂಟರ ಸೈನ್ಯವನ್ನು ಸೋಲಿಸಿ ಹಿಮ್ಮೆಟ್ಟಿಸಿತು. ಇದರ ಪರಿಣಾಮವಾಗಿ ಮಾಲವರಾಜ್ಯದ ದಕ್ಷಿಣದ ಗಡಿ ತಪತಿ ನದಿಯ ವರೆಗೂ ವಿಸ್ತರಿಸಿತು. ಸ್ವತಂತ್ರ ಪರಮಾರ ರಾಜ್ಯವನ್ನು ನಿರ್ಮಿಸಿದ ಕೀರ್ತಿ ಇವನಿಗೆ ಸಲ್ಲುತ್ತದೆ. ಇವನು ಸುಮಾರು 948 ರಿಂದ 974ರ ವರೆಗೆ ಆಳಿದ. ಇವನ ಮಕ್ಕಳಾದ ಮುಂಜ ಅಥವಾ 2ನೆಯ ವಾಕ್ಪತಿ ಮತ್ತು ಸಿಂಧುರಾಜರು ಅನುಕ್ರಮವಾಗಿ ಮಾಲವವನ್ನು ಆಳಿದರು. ಮುಂಜ ರಾಜ 974ರಿಂದ 995 ರ ವರೆಗೆ ಆಳಿದ. ಇವನಿಗೆ ಶ್ರೀವಲ್ಲಭ, ಪೃಥ್ವೀವಲ್ಲಭ, ಅಮೋಘವರ್ಷ ಎಂಬ ಬಿರುದುಗಳಿದ್ದುವು. ಸ್ವತಂತ್ರ ಮಾಲವ ರಾಜ್ಯಕ್ಕೆ ಉತ್ತರಾಧಿಕಾರಿಯಾಗಿ ಇವನು ಅಧಿಕಾರಕ್ಕೆ ಬಂದಾಗ ಮಾಲವ ರಾಜ್ಯ ಉತ್ತರದಲ್ಲಿ ಜಾಲೋರ್‍ವರೆಗೂ ಪೂರ್ವದಲ್ಲಿ ಬಿಲ್ಸ ದಕ್ಷಿಣದಲ್ಲಿ ತಪತಿ ಮತ್ತು ಪಶ್ಚಿಮದಲ್ಲಿ ಸಾಬರಮತಿಯವರೆಗೂ ವ್ಯಾಪಿಸಿತ್ತು. ಇವನು ಇದನ್ನು ಮತ್ತಷ್ಟು ವಿಸ್ತರಿಸಲು ತನ್ನ ಶಕ್ತಿಸಾಮಥ್ರ್ಯಗಳನ್ನು ವಿನಿಯೋಗಿಸಿದ. ಮೇರುತುಂಗನ ಪ್ರಬಂಧಚಿಂತಾಮಣಿಯಲ್ಲಿ ಇವನ ಸಾಹಸವನ್ನು ವೈಭವಯುತವಾಗಿ ವರ್ಣಿಸಲಾಗಿದೆ. ಇವನು ಅನೇಕ ಸಂಸ್ಕøತ ಕವಿಗಳಿಗೆ ಆಶ್ರಯ ನೀಡಿದ್ದನಲ್ಲದೆ, ತಾನೇ, ಸ್ವತಃ ಕವಿಯಾಗಿದ್ದ; ಸಮರ ಮತ್ತು ಶಾಂತಿಯಲ್ಲಿ ಸಮನಾಗಿ ಪ್ರಸಿದ್ಧಿ ಗಳಿಸಿದ್ದ. ಕಳಚುರಿಗಳು, ಹೂಣರು, ಗುಹಿಲರು ಮತ್ತು ಚಾಹಮಾನರ ಮೇಲೆ ಯಶಸ್ವಿ ಹೋರಾಟ ನಡೆಸಿದ. ತಾನು ಗೆದ್ದ ಪ್ರದೇಶಗಳ ಮೇಲೆ ಪರಮಾರ ವಂಶದ ರಾಜಕುಮಾರರನ್ನು ಆಡಳಿತಾಧಿಕಾರಿಗಳಾಗಿ ನೇಮಿಸಿದ. ಈ ರಾಜಕುಮಾರರು ಕಾಲಕ್ರಮದಲ್ಲಿ ಪ್ರತ್ಯೇಕ ಉಪಶಾಖೆಯನ್ನು ಸ್ಥಾಪಿಸಿ ಅನೇಕ ವರ್ಷಗಳ ವರೆಗೆ ರಾಜ್ಯವಾಳಿದರು. ಚಾಳುಕ್ಯ 2ನೆಯ ತೈಲಪನ ವಿರುದ್ಧ ಮುಂಜ ಆರು ಬಾರಿ ಯುದ್ಧ ಮಾಡಿದ. ಏಳನೆಯ ಬಾರಿ ತೈಲಪ ಅವನನ್ನು ಸೋಲಿಸಿ ಸೆರೆಯಲ್ಲಿಟ್ಟು ಕೊಲ್ಲಿಸಿದ (995). ಮುಂಜ ಒಳ್ಳೆಯ ಯೋಧನಾಗಿದ್ದನ್ನಲ್ಲದೆ ವಿದ್ಯಾಪಕ್ಷಪಾತಿಯಾಗಿದ್ದು ಪದ್ಮಗುಪ್ತ, ಧನಂಜಯ, ಹಲಾಯುಧ ಮುಂತಾದವರಿಗೆ ಆಶ್ರಯದಾತನಾಗಿದ್ದ. ಇವನು ಅನೇಕ ದೇವಾಲಯಗಳನ್ನೂ ಕೆರೆಕಾಲುವೆಗಳನ್ನೂ ನಿರ್ಮಿಸಿದ. ಇವನ ತರುವಾಯ ಇವನ ಸಹೋದರ ಸಿಂಧುರಾಜ ಆಳಿದ. ಇವನು ಚಾಳುಕ್ಯರನ್ನು ಸೋಲಿಸಿ ತನ್ನ ಸಹೋದರನ ಕಾಲದಲ್ಲಿ ಕಳೆದುಹೋಗಿದ್ದ ಪ್ರದೇಶಗಳನ್ನು ಮತ್ತೆ ಪಡೆದ. ಇವನ ಆಸ್ಥಾನದಲ್ಲಿದ್ದ ಪದ್ಮ ಗುಪ್ತ ಇವನನ್ನು ಕುರಿತು ನವಸಹಸಾಂಕ ಎಂಬ ಕೃತಿಯನ್ನು ರಚಿಸಿದ್ದಾನೆ. ಇವನ ಕಾಲದಲ್ಲಿ ಮಾಲವ ಸ್ವತಂತ್ರ ರಾಜ್ಯವಾಗಿ ಮುಂದುವರಿಯಿತಲ್ಲದೆ. ಇದಕ್ಕೆ ಅನೇಕ ಪ್ರದೇಶಗಳು ಸೇರಿಕೊಂಡುವು. ಇವನ ತರುವಾಯ ಭೋಜರಾಜ ಪಟ್ಟಕ್ಕೆ ಬಂದ. 

	ಪರಮಾರರ ಅಧಿಕಾರ ಮುಂಜ ಮತ್ತು ಸಿಂಧುರಾಜರ ಕಾಲದಲ್ಲಿ ಸಂಘಟಿತವಾಗಿ, ಭೋಜನ ಕಾಲದಲ್ಲಿ ಸಾಮ್ರಾಜ್ಯದ ಶ್ರೇಣಿಯನ್ನು ಮುಟ್ಟಿತು. ಭೋಜ ಸು.1010ರ ಸಮಯದಲ್ಲಿ ಮಾಲವ ಸಿಂಹಾಸನವನ್ನೇರಿದ. ಮಾಲದವ ವೈಭವ ಇವನ ಕಾಲದಲ್ಲಿ ಉತ್ತುಂಗ ಶಿಖರವನ್ನೇರಿತು. ಮಧ್ಯಕಾಲೀನ ಭಾರತದ ಪ್ರಸಿದ್ಧ ಅರಸರಲ್ಲಿ ಇವನೊಬ್ಬ. ಇವನು 40 ವರ್ಷಗಳಿಗೂ ಹೆಚ್ಚು ಕಾಲ (1010-1055) ಆಳ್ವಿಕೆ ನಡೆಸಿದ. ಭೋಜನ ದಿಗ್ವಿಜಯಗಳು ಭಾರತೀಯ ದಂತಕಥೆಗಳಲ್ಲೂ ಶಾಸನಗಳಲ್ಲೂ ಜನಪ್ರಿಯವಾಗಿವೆ. ಈತ ಚಾಳುಕ್ಯ, ಚೇದಿ ಮತ್ತು ಮುಸ್ಲಿಂ ರಾಜರ ವಿರುದ್ಧ ಸತತವಾಗಿ ಯುದ್ಧ ಮಾಡಿದ. ಸುಮಾರು 1055ರಲ್ಲಿ ಚಾಳುಕ್ಯರ ದೊರೆ 1ನೆಯ ಸೋಮೇಶ್ವರನೂ ಗುಜರಾತಿನ ದೊರೆ ಭೀಮನೂ ದಾಹಲದ ದೊರೆ ಕರ್ಣನೂ ಒಟ್ಟಾಗಿ ಭೋಜನನ್ನು ಯುದ್ಧದಲ್ಲಿ ಸೋಲಿಸಿದರು, ಸಮುದ್ರಗುಪ್ತನಂತೆ ಇವನಿಗೆ ಅಸಾಮಾನ್ಯವಾದ ಸಾಮಥ್ರ್ಯವಿತ್ತು. ಈತ ರಾಮ, ಧರ್ಮಪುತ್ರ, ವಿಕ್ರಮ ಮತ್ತು ಹಾಲರಂತೆ ಪ್ರಸಿದ್ಧನಾಗಿದ್ದಾನೆ. ವಾಸ್ತು ಶಿಲ್ಪ ದೃಷ್ಟಿಯಿಂದಲೂ ಇವನ ಹೆಸರು ಅಜರಾಮರವಾಗಿದೆ. ಇವನಿಗೆ ಸಾಹಿತ್ಯದಲ್ಲಿ ಅಪಾರ ಅಭಿರುಚಿಯಿತ್ತು. ಇವನಿಗೆ ಕವಿರಾಜ ಮಾಲವ ಚಕ್ರವರ್ತಿ ಎಂಬ ಬಿರುದಿತ್ತು. ಈತ ಕಾವ್ಯ, ಖಗೋಳಶಾಸ್ತ್ರ, ವಾಸ್ತು ಶಾಸ್ತ್ರ, ಮಂತ್ರಶಾಸ್ತ್ರ, ನ್ಯಾಯ, ಪಶುವೈದ್ಯ, ತತ್ತ್ವ, ವ್ಯಾಕರಣ, ಅಲಂಕಾರ ಮೊದಲಾದ ವಿಷಯಗಳ ಮೇಲೆ ಗ್ರಂಥ ರಚಿಸಿದನೆಂದು ಪ್ರತೀತಿ, ಇವನ ಕಾಲದಲ್ಲಿ ಕಾವ್ಯದ ಒಂದು ಹೊಸ ಪ್ರಕಾರ ಆರಂಭವಾಯಿತು. ಶಬ್ದಗಳನ್ನು ಚಮತ್ಕಾರವಾಗಿ ಜೋಡಿಸಿ ರಚಿಸುವ ಕಲೆ ಮುಂದೆ ಬಂತು. ಶಬ್ಧವಷ್ಟೆ ಅರ್ಥಕ್ಕೆ ಪ್ರಧಾನ್ಯ ನೀಡಲಾಯಿತು. ಕಾವ್ಯದ ವಸ್ತುವಿನಷ್ಟೇ ಕಾವ್ಯದ ತಂತ್ರವೂ ಮುಖ್ಯವಾಯಿತು. ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಲು ತನ್ನ ರಾಜಧಾನಿಯಾದ ಧಾರಾ ನಗರದಲ್ಲಿ ಸರಸ್ವತಿ ದೇವಾಲಯವೆಂದು ಒಂದು ವಿಶ್ವವಿದ್ಯಾಲಯವನ್ನು ಈತ ಸ್ಥಾಪಿಸಿದ. ಪ್ರಖ್ಯಾತ ಸಂಸ್ಕøತ ಮಹಾಕಾವ್ಯಗಳಿಂದ ಆಯ್ದ ಕೆಲವು ಸ್ವಾರಸ್ಯಕರ ಭಾಗಗಳನ್ನು ಕಲ್ಲುಗಳ ಮೇಲೆ ಕೆತ್ತಿಸಿ, ವಿದ್ಯಾಲಯದ ಗೋಡೆಗಳನ್ನು ಕಟ್ಟಲು ಆ ಕಲ್ಲುಗಳನ್ನು ಉಪಯೋಗಿಸಲಾಯಿತು. ಪ್ರಭಾಚಂದ್ರ ಸೂರಿ, ಶಾಂತಿಸೇನ ಮತ್ತು ಧನಪಾಲ ಎಂಬ ಜೈನಕವಿಗಳು ಇವನ ಆಶ್ರಿತರಾಗಿದ್ದರು. ವಿಘ್ನೇಶ್ವರ ಎಂಬುವನು ಮಿತಾಕ್ಷರ ಎಂಬ ಗ್ರಂಥವನ್ನು ರಚಿಸಿದ. ಭೋಜ ಶೈವಪಂಥದ ಅನುಯಾಯಿಯಾಗಿದ್ದ, ಇತರ ಧರ್ಮದವರನ್ನು ಮರ್ಯಾದೆಯಿಂದ ಕಾಣುತ್ತಿದ್ದ. ವೈದಿಕ, ಜೈನ ಮತ್ತು ಭೌದ್ಧರ ನಡುವೆ ಆಗಾಗ್ಗೆ ಧಾರ್ಮಿಕ ಚರ್ಚೆಗಳು ಏರ್ಪಡುತ್ತಿದ್ದುವು. ಇವನು ಸುಂದರವಾದ ಅನೇಕ ದೇವಾಲಯಗಳನ್ನು ಮತ್ತು ಕೆರೆಗಳನ್ನು ನಿರ್ಮಿಸಿದ. ಇವನು ಕಟ್ಟಿಸಿದ ಭೋಜರಾಜರ ಸರೋವರ ಬಹು ಪ್ರಖ್ಯಾತವಾಗಿದೆ.

	ಭೋಜನ ತರುವಾಯ ಪರಮಾರರ ವಂಶದ ವೈಭವ ಕ್ಷೀಣಿಸಲಾರಂಭಿಸಿತು. ಪೂರ್ವ ಮತ್ತು ಪಶ್ಚಿಮ ದಿಕ್ಕಿನ ನೆರೆಹೊರೆಯವರೊಡನೆ ಹೋರಾಡುತ್ತಿದ್ದಾಗ ಭೋಜ ಕಾಯಿಲೆಯಿಂದ ಮಡಿದ. ಮಾಲವ ಕಳಚುರಿ ಮತ್ತು ಚಾಳುಕ್ಯರ ವಶವಾಯಿತು.

	ಭೋಜನ ತರುವಾಯ ಅವನ ಮಗ ಜಯಸಿಂಹ 6ನೆಯ ವಿಕ್ರಮಾದಿತ್ಯನ ಸಹಾಯದಿಂದ ಶತ್ರುಗಳನ್ನು ಓಡಿಸಿ ಮಾಲವ ಸಿಂಹಾಸನವನ್ನು ಮತ್ತೆ ಪಡೆದ. ವಿಕ್ರಮಾದಿತ್ಯ ಇವನ ಪರಮ ಮಿತ್ರನಾದ. ಆದರೆ ಇವನ ಸಹೋದರಿ ಚಾಳುಕ್ಯ ಚಕ್ರವರ್ತಿ 2ನೆಯ ಸೋಮೇಶ್ವರನಿಗೆ ಇವನ ಹಗೆಯಾದ. 6ನೆಯ ವಿಕ್ರಮಾದಿತ್ಯನ ಉದ್ದೇಶದ ಬಗ್ಗೆ ಇವನ ಕಿರಿಯ ತಮ್ಮ ಸಂಶಯಗೊಂಡ. ಜಯಸಿಂಹನನ್ನು ಶಿಕ್ಷಿಸಲು ಸೋಮೇಶ್ವರ ಗುಜಾರಾತಿನ ಚಾಳುಕ್ಯ ರಾಜ ಕರ್ಣನೊಡನೆ ಕೂಡಿ ಮಾಲವದ ಮೇಲೆ ಯುದ್ಧ ಹೂಡಿದ. ಇದರಲ್ಲಿ ಜಯಸಿಂಹ ಮೃತನಾದ. ಸೋಮೇಶ್ವರ ಮತ್ತು ಕರ್ಣರು ಮಾಲವವನ್ನು ವಶಪಡಿಸಿಕೊಂಡರು. ಇಂಥ ವಿಷಮ ಪರಿಸ್ಥಿತಿಯಲ್ಲಿ ಭೋಜರಾಜನ ಸಹೋದರ ಉದಯಾದಿತ್ಯ ಚಾಹಮಾನರ ನೆರವಿನಿಂದ ಶತ್ರುಗಳನ್ನು ಹಿಮ್ಮೆಟ್ಟಿಸಿ ಮಾಲವವನ್ನು ವಾಪಸು ಪಡೆದ. ಇವನ ಕಾಲದಲ್ಲಿ ಮಾಲವ ರಾಜ್ಯ ದಕ್ಷಿಣದಲ್ಲಿ ನೀಮರ್ ಜಿಲ್ಲೆ ಮತ್ತು ಉತ್ತರದಲ್ಲಿ ಜಾಲ್‍ವಾರ್‍ವರೆಗೂ ಪೂರ್ವದಲ್ಲಿ ಭಿಲ್ಸದ ವರೆಗೂ ಹಬ್ಬಿತ್ತೆಂದು 1080-1086 ಅವಧಿಗೆ ಸಂಬಂಧಿಸಿದ ಶಾಸನಗಳು ತಿಳಿಸುತ್ತವೆ.

	ಇವನ ತರುವಾಯ ಇವನ ಮಕ್ಕಳಾದ ಲಕ್ಷ್ಮಣದೇವ ಮತ್ತು ನರವರ್ಮರು ಆಳಿದರು. ಗೌಡ, ಚೋಳ ಮತ್ತು ಕಳಚುರಿಗಳೊಡನೆ ಲಕ್ಷ್ಮಣದೇವ ಯುದ್ಧ ಮಾಡಿದನಲ್ಲದೆ, ಉಜ್ಜಯಿನಿಯ ಮೇಲೆ ನಡೆದ ಮುಸ್ಲಿಂ ಆಕ್ರಮಣವನ್ನು ಹಿಮ್ಮೆಟ್ಟಿಸಿದ. ಇವನ ತರುವಾಯ ಇವನ ಸಹೋದರ ನರವರ್ಮ ನಿರ್ವಾಣ ನಾರಾಯಣನೆಂಬ ಬಿರುದಿನಿಂದ ಸುಮಾರು 1094ರಲ್ಲಿ ಮಾಲವದ ಸಿಂಹಾಸನವನ್ನೇರಿದ. ಇವನು ಸ್ವತಃ ಕವಿಯಾಗಿದ್ದು ವಿದ್ಯಾಪೋಷಕನಾಗಿದ್ದ. ಇವನ ಅನಂತರ ಸುಮಾರು 1133ರಲ್ಲಿ ಯಶೋವರ್ಮ ಪರಮಾರ ಸಿಂಹಾಸನವನ್ನೇರಿದ. ಇವನು ಅವನತಿ ಹೊಂದುತ್ತಿದ್ದ ಮಾಲವ ರಾಜ್ಯವನ್ನು ಸಂಘಟಿಸಲು ವಿಫಲನಾದ. ಅನೇಕ ಬಲಿಷ್ಠ ಸಾಮಂತ ಅರಸರು ಸ್ವತಂತ್ರವಾಗಿ ಅಳಲು ಪ್ರಾರಂಭಿಸಿದರು. ಚಂದೇಲರ ಮದನವರ್ಮ ಬಲಾತ್ಕಾರವಾಗಿ ಭಿಲ್ಸ ಪ್ರದೇಶವನ್ನು ಆಕ್ರಮಿಸಿಕೊಂಡ. ಗುಜಾರಾತಿನ ಜಯಸಿಂಹ ಸಿದ್ಧರಾಜ ಚಾಹಮಾನರೊಡಗೂಡಿ ಮಾಲವವನ್ನು ಆಕ್ರಮಿಸಿಕೊಂಡು ಯಶೋವರ್ಮನನ್ನು ಸೆರೆಹಿಡಿದ. ಯಶೋವರ್ಮನ ಮಗ ಜಯವರ್ಮ ಸಿದ್ಧರಾಜನ ಕೊನೆಗಾಲದಲ್ಲಿ ಮಾಲವ ರಾಜ್ಯವನ್ನು ಮರಳಿ ಪಡೆಯುವುದರಲ್ಲಿ. ಯಶಸ್ವಿಯಾದ. ಆದರೆ ಅವನು ಮಾಲವವನ್ನು ತನ್ನ ಸ್ವಾಧೀನದಲ್ಲಿ ಬಹಳ ಕಾಲ ಇಟ್ಟುಕೊಳ್ಳಲಾಗಲಿಲ್ಲ. ಕಲ್ಯಾಣಿ ಚಾಳುಕ್ಯರ ಜಗದೇಕಮಲ್ಲ ಮತ್ತು ಹೊಯ್ಸಳ 1ನೆಯ ನರಸಿಂಹರು ಮಾಲವದ ಮೇಲೆ ದಾಳಿ ನಡೆಸಿ ಅವನ ಅಧಿಕಾರವನ್ನು ನಾಶಮಾಡಿಸಿದರು. ಮಾಲವದಲ್ಲಿ ಬಲ್ಲಾಳನೆಂಬವನನ್ನು ರಾಜನಾಗಿ ಮಾಡಲಾಯಿತು. 1143ರ ವೇಳೆಗೆ ಸಿದ್ಧರಾಜನ ಉತ್ತರಾಧಿಕಾರಿ ಕುಮಾರಪಾಲ ಮಾಲವದಲ್ಲಿ ಪ್ರತಿಷ್ಠಾಪಿಸಿದ್ದ ಬಲ್ಲಾಳನನ್ನು ಪದಚ್ಯುತಗೊಳಿಸಿ ಭಿಲ್ಸದ ವರೆಗಿನ ಮಾಲವ ರಾಜ್ಯವನ್ನು ತನ್ನ ರಾಜ್ಯಕ್ಕೆ ಸೇರಿಸಿಕೊಂಡ. ಸುಮಾರು 20 ವರ್ಷಗಳ ಕಾಲ ಮಾಲವ ಗುಜರಾತಿನ ಚೌಳುಕ್ಯರ ಅಧೀನದಲ್ಲಿತ್ತು. ಈ ಅವಧಿಯಲ್ಲಿ ಪರಮಾರ ವಂಶದ ರಾಜರನ್ನು ಮಹಾಕುಮಾರರು ಎಂದು ಕರೆಯಲಾಗುತ್ತಿತ್ತು. ಇವರು ಭೂಪಾಲ್, ನೀಮರ್, ಹೊಳಂಗಾಬಾದ್, ಖಾಂದೇಶ ಪ್ರದೇಶಗಳಲ್ಲಿ ಸಣ್ಣಪುಟ್ಟ ರಾಜರುಗಳಾಗಿ ಆಳುತ್ತಿದ್ದರು.

	ಆದರೆ 12ನೆಯ ಶತಮಾನದ ಉತ್ತರಾರ್ಧದಲ್ಲಿ ಪರಮಾರ ಜಯವರ್ಮನ ಪುತ್ರ ವಿಂಧ್ಯವರ್ಮ ಚಾಳುಕ್ಯ 2ನೆಯ ಮೂಲರಾಜನನ್ನು ಸೋಲಿಸಿ ಮಾಲದ ರಾಜ್ಯವನ್ನು ಮತ್ತೆ ಗಳಿಸಿದ. ಆದರೆ ಹೊಸದಾಗಿ ಗಳಿಸಿದ ತನ್ನ ಪೂರ್ವಿಕರು ರಾಜ್ಯವನ್ನು ಅವನು ಬಹಳ ಕಾಲ ಆಳಲಿಲ್ಲ. ದಖನ್ನಿನಲ್ಲಿ ಚಾಳುಕ್ಯರು ಅವನತಿ ಹೊಂದಿದರೂ ಅವನಿಗೆ ಶತ್ರುಗಳ ಬಾಧೆ ತಪ್ಪಲಿಲ್ಲ. ಅವರ ಸ್ಥಾನದಲ್ಲಿ ಹೊಯ್ಸಳರು ಮತ್ತು ದೇವಗಿರಿ ಯಾದವರು ಏಳಿಗೆ ಹೊಂದಿ ಮಾಲವದ ಮೇಲೆ ಏಕಪ್ರಕಾರವಾಗಿ ಆಕ್ರಮಣ ನಡೆಸಿದರು. ಸುಮಾರು 1190ರಲ್ಲಿ ಚೋಳರೊಡನೆ ಮೈತ್ರಿ ಏರ್ಪಡಿಸಿಕೊಂಡು ಪ್ರಬಲವಾಗುತ್ತಿದ್ದ ಹೊಯ್ಸಳರ ಅಧಿಕಾರವನ್ನು ನಾಶಮಾಡಲು ಅವನು ಯತ್ನಿಸಿದ. ಆದರೆ ಇಮ್ಮಡಿ ಬಲ್ಲಾಳ ಇವರನ್ನು ಯಶ್ವಸ್ವಿಯಾಗಿ ಹಿಮ್ಮೆಟ್ಟಿಸಿದ. ಯಾದವರ ಬಿಲ್ಹಣ ಮಾಲವ ರಾಜ್ಯದ ಮೇಲೆ ದಾಳಿ ನಡೆಸಿ ಕೊಳ್ಳೆಹೊಡೆದ. ಇವೆಲ್ಲ ಭಾಧಕಗಳಿದ್ದಾಗ್ಯೂ ವಿಂಧ್ಯವರ್ಮ ಶತ್ರುಗಳನ್ನು ಎದುರಿಸುವುದರಲ್ಲಿ ಯಶಸ್ವಿಯಾದ. ಇವನು ಮರಣ ಹೊಂದುವ ವೇಳೆಗೆ (1193) ಪರಮಾರ ರಾಜ್ಯವನ್ನು ಸಂಘಟಿಸಿದ. ಇವನ ಉತ್ತರಾಧಿಕಾರಿ ಸುಭತವರ್ಮ ಗುಜರಾತಿನ ಮೇಲೆ ಆಕ್ರಮಣ ಎಸಗಿ ಅನೇಕ ಜೈನ ದೇವಾಯಲಯಗಳನ್ನು ಲೂಟಿ ಮಾಡಿ ಸೋಮನಾಥವನ್ನು ತಲುಪಿದ. ಆದರೆ ಅವನ ಮುನ್ನಡೆಯನ್ನು 2ನೆಯ ಭೀಮನ ಮಂತ್ರಿ ತಡೆದು ಅವನು ಗುಜರಾತಿನಿಂದ ನಿರ್ಗಮಿಸುವಂತೆ ಮಾಡಿದ. ಅನಂತರ ಅವನು ಯಾದವರ ಜೈತುಗಿಯಿಂದ ಸೋಲನ್ನು ಅನುಭವಿಸಬೇಕಾಯಿತು. ಅವನ ತರುವಾಯ ಅವನ ಮಗ ಅರ್ಜುನವರ್ಮ ಸುಮಾರು 1210ರಲ್ಲಿ ಮಾಲವದ ಅಧಿಪತಿಯಾದ. ಇವನು ಗುಜರಾತಿನೊಡನೆ ಯುದ್ಧ ಮುಂದುವರಿಸಿದ. ಕೊನೆಯಲ್ಲಿ ಆ ರಾಜ್ಯದ ರಾಜಪುತ್ರಿಯನ್ನು ವಿವಾಹವಾದ. ಈ ಎರಡು ರಾಜ್ಯಗಳ ನಡುವೆ ನಡೆದ ಯುದ್ಧವನ್ನು ಆಧರಿಸಿ ಪಾರಿಜಾತಮಂಜರಿ ಎಂಬ ನಾಟಕವನ್ನು ಅರ್ಜುನವರ್ಮನ ಗುರು ಮದನ ರಚಿಸಿದ್ದಾನೆ. ಅರ್ಜುನವರ್ಮ ತನ್ನ ಪೂರ್ವಿಕರಂತೆಯೇ ಯಾದವರನ್ನು ಎದುರಿಸಲು ವಿಫಲನಾದ. ಇವನು ಸ್ವತಃ ಕವಿಯಾಗಿದ್ದ. ಇವನ ಆಸ್ಥಾನದಲ್ಲಿ ಅನೇಕ ವಿದ್ವಾಂಸರಿದ್ದರು. ಇವನ ತರುವಾಯ ದೇವಪಾಲ ಪರಮಾರ ಸಿಂಹಾಸನಕ್ಕೆ ಉತ್ತರಾಧಿಕಾರಿಯಾದ. ಇವನ ರಾಜ್ಯ ಕೆಲವೇ ಪ್ರದೇಶಗಳಿಗೆ ಸೀಮಿತಗೊಂಡಿತ್ತು. ಇವನ ಕಾಲದಲ್ಲಿ ಮಾಲವದ ಮೇಲೆ ಮುಸ್ಲಿಮರು ಆಕ್ರಮಣ ನಡೆಸಿದರು. 1233ರಲ್ಲಿ ಅಲ್ತತ್‍ಮಿಷ್ ಭಿಲ್ಸವನ್ನು ವಶಪಡಿಸಿಕೊಂಡು ಉಜ್ಜಯಿನಿಯನ್ನು ಕೊಳ್ಳೆ ಹೊಡೆದ. ಅರ್ಜುನವರ್ಮನ ತರುವಾಯ ಇವನ ಮಗ ಜೈತುಗಿದೇವ ಸುಮಾರು 1243ರಲ್ಲಿ ಪಟ್ಟಕ್ಕೆ ಬಂದ. ಇವನ ಕಾಲದಲ್ಲಿ ಮಾಲವ ಶತ್ರುಗಳಿಗೆ ತುತ್ತಾಯಿತು. ಯಾದವರ ದೊರೆ ಕೃಷ್ಣ ದಾಳಿ ನಡೆಸಿದ. 1250ರಲ್ಲಿ ಬಲ್ಪನನೂ ಅದೇ ಕಾಲದಲ್ಲಿ ಗುಜರಾತಿನ ವಾಘೇಲ ವಿಶಾಲದೇವನೂ ಧಾರವನ್ನು ಮತ್ತಿದರು. ಇವನ ತರುವಾಯ ಕಿರಿಯ ತಮ್ಮ 2ನೆಯ ಜಯವರ್ಮ ಆಳಿದ. ಅನಂತರ 2ನೆಯ ಜಯಸಿಂಹ ರಾಜ್ಯವಾಳಿದ. ಇವನ ಕಾಲದಲ್ಲಿ ರಣತಂಬೂರಿನ ಚಾಹಮಾಣರು ಆಕ್ರಮಣ ಮಾಡಿ, ಪರಮಾರ ಸೈನ್ಯವನ್ನು ಸಂಪೂರ್ಣವಾಗಿ ಸೋಲಿಸಿದರು. ಅನಂತರ ಬಂದ 2ನೆಯ ಅರ್ಜುನವರ್ಮನಿಗೂ ಅವನ ತಂದೆಯ ಬಳಿ ಮಂತ್ರಿಯಾಗಿದ್ದವನಿಗೂ ಅಧಿಕಾರಕ್ಕಾಗಿ ಪೈಪೋಟಿ ನಡೆದು ಅವರು ತಂತಮ್ಮ ವಶದಲ್ಲಿದ್ದ ಪ್ರದೇಶಗಳನ್ನಾಳಲಾರಂಭಿಸಿದರು. 2ನೆಯ ಅರ್ಜುನವರ್ಮನ ಕಾಲದಲ್ಲಿ ರಣತಂಬೂರಿನ ಚಾಹಮಾಣರು. ಯಾದವರು ಮತ್ತು ವಾಘೇಲರು ಮಾಲವದ ಆಕ್ರಮಣ ಎಸಗಿದರು. ಅನಂತರ ಕಾಣಿಸುವ ಪರಮಾರ ಅರಸನೆಂದರೆ 2ನೆಯ ಭೋಜ. ಇವನು 1283ರಲ್ಲಿ ಸಿಂಹಾಸನಕ್ಕೆ ಬಂದ. ಇವನ ಕಾಲದಲ್ಲಿ ಮಾಲವದ ಮೇಲೆ ಮತ್ತೆ ಚಾಹಮಾಣರೂ ಸುಲ್ತಾನ್ ಜಲಾಲುದ್ಧೀನ್ ಖಲ್ಜಿಯೂ ಆಕ್ರಮಣ ನಡೆಸಿದರು. 2ನೆಯ ಭೋಜನ ತರುವಾಯ ಮಹಲಕ್ ದೇವ ಸುಮಾರು 1305ರಲ್ಲಿ ಆಳುತ್ತಿದ್ದ. ಇವನ ಆಳ್ವಿಕೆಯ ಕಾಲದಲ್ಲಿ ಅಲ್ಲಾ-ಉದ್-ದೀನ್ ಖಲ್ಜಿ ದಾಳಿ ನಡೆಸಿದ. ಅವನೊಡನೆ ಹೋರಾಡುತ್ತಿದ್ದಾಗ ಇವನ ದಂಡನಾಯಕ ಕೊಲ್ಲಲ್ಪಟ್ಟ. ಇವನು ಐನುಲ್ ಮುಲ್ಕನಿಂದ ಕೊಲೆಗೆ ಈಡಾದ. ಕೊನೆಗೆ ಮಾಲವ ರಾಜ್ಯವನ್ನು ಮುಸ್ಲಿಮರು ಗೆದ್ದುಕೊಂಡರು.

	ಶಾಖೆಗಳು : ಮಾಲವದ ಮೂಲ ಪರಮಾರದಿಂದ ರಾಜಪುಟಾಣದಲ್ಲಿ ನಾಲ್ಕು ಶಾಖೆಗಳು ಹುಟ್ಟಿಕೊಂಡು ಅನೇಕ ವರ್ಷಗಳ ಕಾಲ ಪ್ರತ್ಯೇಕವಾಗಿ ಆಳಿದುವು. ಮೌಂಟ್ ಅಬು, ವಾಗಡ, ಜಾಲೋರ್, ಭಿನ್ಮಾಲ್ ಶಾಖೆಗಳು ಮುಖ್ಯವಾದವು.

	ಮೌಂಟ್ ಅಬುವಿನ ಪರಮಾರರು: 10ನೆಯ ಶತಮಾನದ ಉತ್ತರಾರ್ಧದಲ್ಲಿ ಮಾಲವದರ ವಾಕ್ಪತಿ ಮುಂಜ ತನ್ನ ಪುತ್ರ ಅರಣ್ಯರಾಜನನ್ನು ಮೌಂಟ್ ಅಬುವಿನ ಅಧಿಕಾರಿಯಾಗಿ ನೇಮಿಸಿದ. ಚಂದ್ರಾವತಿ ಈ ರಾಜ್ಯದ ರಾಜಧಾನಿ. ಅರಣ್ಯರಾಜನ ಅನಂತರ ಬಂದವರು ಕೃಷ್ಣರಾಜ, ಧರಣಿವರಾಹ, ಮಹೀಪಾಲ ಮತ್ತು ದಾಂಡುಕ. ಗುಜರಾತ್ ಚಾಳುಕ್ಯರ 1ನೆಯ ಭೀಮನಿಂದ ದಾಂಡುಕ ಪದಚ್ಯುತನಾದ (1030). ಆದರೆ ದಾಂಡುಗಕನಿಗೆ ಮತ್ತೆ ಸಿಂಹಾಸನ ಕೊಡಲಾಯಿತು. ಅನಂತರ ಇವನ ಮಕ್ಕಳಾದ ಪೂರ್ಣಪಾಲ, ದಂತಿವರ್ಮ ಮತ್ತು 2ನೆಯ ಕೃಷ್ಣರು ಅನುಕ್ರಮವಾಗಿ ಆಳಿದರು. ಇವರ ಪೈಕಿ ಮೊದಲನೆಯವನಾದ ಪೂರ್ಣಪಾಲ ಗುಜರಾತಿನ ಚಾಳುಕ್ಯರಿಂದ ಸ್ವಾತಂತ್ರ್ಯವನ್ನು ಘೋಷಿಸಿಕೊಂಡ. 1ನೆಯ ಭೀಮ ಇದನ್ನು ಸಹಿಸದೆ ಮೌಂಟ್ ಅಬುವನ್ನು ಆಕ್ರಮಿಸಿಕೊಂಡು ತನ್ನ ಸ್ವಾಧೀನದಲ್ಲಿ ಇರಿಸಿಕೊಂಡ. ಅಂದಿನಿಂದ ಮೌಂಟ್ ಅಬು ಗುಜರಾತಿನ ಚಾಳುಕ್ಯರ ರಾಜ್ಯದ ಒಂದು ಭಾಗವಾಗಿ ಉಳಿದುಕೊಂಡಿತು. 2ನೆಯ ಕೃಷ್ಣನ ತರುವಾಯ ದಂತಿವರ್ಮನ ಮಗ ಯೋಗರಾಜನೂ ಅನಂತರ ರಾಮದೇವನೂ ಅನುಕ್ರಮವಾಗಿ ರಾಜ್ಯವಾಳಿದರು. ರಾಮದೇವನ ಆಳ್ವಿಕೆಯ ಕಾಲದಲ್ಲಿ ಮೌಂಟ್ ಅಬುವಿನ ಸಿಂಹಾಸನವನ್ನು 2ನೆಯ ಕೃಷ್ಣನ ಮಗ ಕಾಕಲದೇವ ಆಕ್ರಮಿಸಿಕೊಂಡ. ಇವನ ತರುವಾಯ ವಿಕ್ರಮ ಸಿಂಹ ಪಟ್ಟಕ್ಕೆ ಬಂದ. ಇವನ ತರುವಾಯ ಯಶೋವರ್ಮ, ಧಾರಾವರ್ಷ ಹೀಗೆ ಸುಮಾರು ಹತ್ತೊಂಬತ್ತು ಅರಸರು ಮೌಂಟ್ ಅಬುವಿನಲ್ಲಿ ಆಳ್ವಿಕೆ ನಡೆಸಿದರು. 1320ರಲ್ಲಿ ಈ ಪುಟ್ಟ ರಾಜ್ಯ ಮಾರವಾಡದ ಚಾಹಮಾಣರ ಅಧೀನವಾಯಿತು.

	ವಾಗಡದ ಪರಮಾರರು: 10ನೆಯ ಶತಮಾನದ ಮಧ್ಯದಲ್ಲಿ ಉಪೇಂದ್ರನ ಕಿರಿಯ ಮಗ ದಂಬರಸಿಂಹನ ಸಂತತಿಯ ಧನಿಕ ಎಂಬವನು ವಾಗಡ ರಾಜ್ಯವನ್ನು ಸ್ಥಾಪಿಸಿದ. ಇವನ ಉತ್ತರಾಧಿಕಾರ ಚಚ್ಛ. ಇವನು 2ನೆಯ ಸೀಯಕನ ಪರವಾಗಿ ರಾಷ್ಟ್ರಕೂಟರ ಕೊಟ್ಟಿಗನ ವಿರುದ್ಧ ಹೋರಾಡುವಾಗ ಯುದ್ಧದಲ್ಲಿ ಮಡಿದ. ಅನಂತರ ಚಂಪ ಮತ್ತು ಸತ್ಯರಾಜ ಅನುಕ್ರಮವಾಗಿ ಆಳ್ವಿಕೆ ನಡೆಸಿದರು. ಸತ್ಯರಾಜ ಚಾಳುಕ್ಯರ ವಿರುದ್ಧ ಭೋಜನಿಗೆ ನೆರವು ನೀಡಿದ. ಇವನ ಅನಂತರ ನಾಲ್ವರು ಆಳಿದರು. 12ನೆಯ ಶತಮಾನದ ಮಧ್ಯದಲ್ಲಿ ವಾಗಡ ರಾಜ್ಯವನ್ನು ಗುಹಿಲರು ಆಕ್ರಮಿಸಿಕೊಂಡರು.

	ಜಾಲೋರಿನ ಪರಮಾರರು: ಮುಂಜನ ಮಗ ಚಂದ ಈ ಶಾಖೆಯ ಪ್ರಥಮದೊರೆ. ಇವನ ತರುವಾಯ ದೇವರಾಜ, ಅಪರಾಜಿತ, ವಿಜ್ಜಲ, ಧಾರಾವರ್ಷ ಮತ್ತು ವಿಶಾಲರು ಅನುಕ್ರಮವಾಗಿ ಆಳಿದರು. ಈ ಸಂತತಿಯ ಕೊನೆಯ ದೊರೆ ಕುಮಾರಪಾಲ. 12ನೆಯ ಶತಮಾನದ ಕೊನೆಯ ಭಾಗದಲ್ಲಿ ಈ ರಾಜ್ಯವನ್ನು ಚಾಹಮಾಣರು ವಶಪಡಿಸಿಕೊಂಡರು.

	ಭಿನ್ಮಾಲಿನ ಪರಮಾರರು: ಸಿಂಧುರಾಜನ ಮಗ ದುಸಲ ಈ ಶಾಖೆಯ ಸ್ಥಾಪಕ 11ನೆಯ ಶತಮಾನದ ಪ್ರಾರಂಭದಲ್ಲಿ ಈ ಸಂತತಿಯ ದೇವರಾಜ ಎಂಬವನು ಚಾಹಮಾಣರ ಮೂರು ಮಂಡಲಗಳನ್ನು ಪಡೆದ. ದೇವರಾಜನ ಮೊಮ್ಮಗ ಕೃಷ್ಣ. ಚಾಳುಕ್ಯರ 1ನೆಯ ಭೀಮ ಇವನನ್ನು ಸೆರೆಯಲ್ಲಿಟ್ಟಿದ್ದ. ಇವನ ತರುವಾಯ ಸೊಚ್ಛರಾಜ, ಉದಯರಾಜ, ಸೋಮೇಶ್ವರ ಇವರು ಸಿಂಹಾಸನವೇರಿದರು. ಉದಯರಾಜ ಪರಾಕ್ರಮಿಯಾಗಿದ್ದ. ಸೋಮೇಶ್ವರನ ಅನಂತರ ಇಬ್ಬರು ದೊರೆಗಳು ಆಳಿದರು. ಈ ರಾಜ್ಯ 13ನೆಯ ಶತಮಾನದ ಪೂರ್ವಾರ್ಧದಲ್ಲಿ ಮಾರವಾಡದ ಚಾಹಮಾಣರ ಸಾರ್ವಭೌಮಾಧಿಕಾರಕ್ಕೆ ಒಳಪಟ್ಟಿತು.        (ಎಂ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ